ಇಳಿವೋರೆ-
ಭೂವಿಜ್ಞಾನದಲ್ಲಿ ಶಿಲಾಸಂಸ್ತರಗಳ ವಿನ್ಯಾಸವನ್ನು ಸೂಚಿಸುವ ಪದ (ಡಿಪ್). ಭೂಮಿಯಲ್ಲಿ ಜಲಜಶಿಲೆಗಳು ಮೊದಲ ಹಂತದಲ್ಲಿ ಮಟ್ಟಸ ಪದರಗಳಾಗಿ (ಹಾರಿಸಾಂಟಲ್ ಲೇಯರ್ಸ್) ರೂಪಗೊಳ್ಳುತ್ತವೆ. ಆದರೆ ನೈಸರ್ಗಿಕ ಬಲಗಳು ಇವನ್ನು ಇದೇ ಸ್ಥಿತಿಯಲ್ಲಿ ಬಲುಕಾಲ ಉಳಿಯಲು ಬಿಡುವುದಿಲ್ಲ. ಕುಸಿತ, ಕಂಪನ ಮುಂತಾದ ಭೂಮಿಯ ಆಂತರಿಕ ಬಲಗಳು; ಗಾಳಿ, ಮಳೆ ಹೊಡೆತ, ನೀರಿನ ಹರಿವು ಮುಂತಾದ ಬಾಹ್ಯಬಲಗಳು-ಇವುಗಳ ಪ್ರಭಾವದಿಂದ ಪದರಗಳ ಪರಂಪರೆಯೇ ತಿರುಚಿ ಮಡಿಸಿ ಏರುಪೇರುಗಳುಂಟಾಗುತ್ತವೆ. 

ಚಿತ್ರ-1

ಪದರಗಳು ಉಳಿದಿದ್ದರೂ ಅವು ಮಟ್ಟಸವಾಗಿರುವುದು ಅಪೂರ್ವ. ಇವುಗಳ ವಿವಿಧ ವಿನ್ಯಾಸಗಳನ್ನು ಅಭ್ಯಸಿಸಿದ ಭೂವಿe್ಞÁನಿಗಳು ಅವನ್ನು ಇಳಿವೋರೆ, ಮಡಿಕೆ ಮತ್ತು ಸ್ತರಭಂಗ (ಫೋಲ್ಡ್ ಅಂಡ್ ಫಾಲ್ಟ್), ನ್ಯಾಪೆ ಎಂದು ಮುಂತಾಗಿ ವರ್ಗೀಕರಿಸಿದ್ದಾರೆ.

	ಬಾಗಿರುವ ಅಥವಾ ಓರೆಯಾಗಿರುವ ಜಲಜಶಿಲೆಗಳ ಪದರವಿನ್ಯಾಸವೇ ಇಳಿವೋರೆ, ಚಿತ್ರದಲ್ಲಿ ಮೂಲಸ್ಥಿತಿಯ ಎಂದರೆ ಬಲಗಳಿಂದ ಪ್ರಭಾವಿತವಾಗದೆ ಮಟ್ಟಸ ಪದರಸ್ಥಿತಿಯಲ್ಲಿಯೇ ಇರುವ ಜಲಜಶಿಲೆಗಳ ಪದರಗಳನ್ನೂ ಇಂಥ ಪದರಗಳ ಒಂದು ಅಡ್ಡ ಕೊಯ್ತವನ್ನೂ ನೋಡಬಹುದು. ಇಲ್ಲಿನ ಪ್ರತಿಯೊಂದು ಪದರವೂ ಭೂತಲದ ಮೇಲಿನ ಮಟ್ಟಸ ತಲಕ್ಕೆ ಸಮಾಂತರವಾಗಿದೆ; ಆದ್ದರಿಂದ ಪ್ರತಿಯೊಂದು ಈ ಮಟ್ಟಸತಲದೊಡನೆ ರಚಿಸುವ ಕೋನ 00. ಇಲ್ಲಿಪದರದ ಇಳಿವೋರೆ 00 ಎನ್ನುತ್ತೇವೆ. 
	
ಚಿತ್ರ-2
	
ಬಲಗಳಿಂದ ಪ್ರಭಾವಿತವಾಗಿ ಮೂಲಸ್ಥಿತಿಯಿಂದ ಭಿನ್ನವಾಗಿರುವ ಪದರವನ್ನು ಚಿತ್ರ(2)ರಲ್ಲಿ ತೋರಿಸಿದೆ. ಇಲ್ಲಿ ಪದರತಲ ಮಟ್ಟಸತಲಕ್ಕೆ ಓರೆಯಾಗಿದೆ; ಇವುಗಳ ನಡುವಿನ ಕೋನ xo ಈ ಓರೆಯ ಮಾನ. ಆದ್ದರಿಂದ ಇಲ್ಲಿ ಪದರದ ಇಳಿವೋರೆ xo ಆಗುವುದು. ಹೀಗೆ ಮಟ್ಟಸತಲಕ್ಕೆ ಪದರತಲ ಓರೆಯಾಗಿರುವ ವಿನ್ಯಾಸ ಇಳಿವೋರೆ; ಮತ್ತು ಅವೆರಡು ತಲಗಳ ನಡುವಿನ ಕೋನ ಇಳಿವೋರೆಯ ಕೋನ. ಈ ಕೋನವನ್ನೇ ಇಳಿವೋರೆ ಎಂದೂ ಹೇಳುವುದಿದೆ. ಇಳಿವೋರೆಯ ಬೆಲೆ 00-900 ವರೆಗೆ ಯಾವ ಬೆಲೆಯೂ ಆಗಬಹುದು.

	ಇಳಿವೋರೆ ಕೋನವೊಂದೇ ಪದರಗಳ ವಿನ್ಯಾಸವನ್ನು ನಿರ್ದಿಷ್ಟಗೊಳಿಸುವುದಿಲ್ಲ. ಪದರಗಳ ಇಳಿವು ಯಾವ ದಿಕ್ಕಿಗೂ ವ್ಯಾಪಿಸಿರಬಹುದು. ಆದ್ದರಿಂದ ಒಂದು ಪ್ರದೇಶದ ಭೂಚರಿತ್ರೆ ಬರೆಯುವಾಗ ಅಲ್ಲಿನ ಪದರಗಳ ಇಳಿವೋರೆಯ ಜೊತೆಗೆ ಅವುಗಳ ಇಳಿವು ಯಾವ ದಿಕ್ಕಿಗಿದೆ ಎಂಬುದನ್ನೂ ಸೂಚಿಸಬೇಕಾಗುತ್ತದೆ. ಇಳಿವೋರೆಯ ದಿಕ್ಕು ಮತ್ತು ಕೋನಗಳನ್ನು ಅಳೆಯುವ ಉಪಕರಣದ ಹೆಸರು ಕಂಪಾಸ್ ಕ್ಲೈನೋಮೀಟರ್. ಒಂದು ಶಿಲಾಪ್ರಸ್ತರ ಸಮೂಹದ ಗರಿಷ್ಠ ಇಳಿವೋರೆ ಒಂದೇ ದಿಕ್ಕಿನಲ್ಲಿರುತ್ತದೆ. ಈ ಇಳಿವೋರೆಯ ಹೆಸರು ನಿಜ ಇಳಿವೋರೆ (ಟ್ರೂ ಡಿಪ್).

	ಇಳಿಜಾರು : ಇಳಿವೋರೆಯ ಓಟ (ಸ್ಲೋಪ್). ಇಳಿವೋರೆ ಕೋನ ಹೆಚ್ಚು ಹೆಚ್ಚಾದಂತೆ ಓಟ, ಆದ್ದರಿಂದ ಇಳಿಜಾರು, ಹೆಚ್ಚು ಹೆಚ್ಚಾಗುತ್ತದೆ. ಮಟ್ಟಸ ಪದರದ ಇಳಿಜಾರು ಸೊನ್ನೆ ಎಂಬುದು ಸ್ಪಷ್ಟ.

ಚಿತ್ರ-3

ಚಿತ್ರ-4

	ಹೀಗೆ ಇಳಿಜಾರಿನ ಸ್ವಭಾವ ಇಳಿವೋರೆಯಿಂದ ಸಾಮಾನ್ಯವಾಗಿ ನಿರ್ಧರಿತವಾಗುತ್ತದೆ. ಇಳಿವೋರೆ ದಿಕ್ಕಿನ ಇಳಿಜಾರು ಕಡಿದಾಗಿರುವುದಿಲ್ಲ. ಇದರ ಹೆಸರು ಇಳಿವೋರೆ ಇಳಿಜಾರು (ಡಿಪ್ ಸ್ಲೋಪ್). ಇಳಿವೋರೆ ದಿಕ್ಕಿನ ವಿರುದ್ಧ ದಿಕ್ಕಿನ ಇಳಿಜಾರು ಕಡಿದಾಗಿರುತ್ತದೆ. ಇದರ ಹೆಸರು ಎದುರು ಇಳಿಜಾರು (ಎಸ್ಕಾರ್ಪ್‍ಮೆಂಟ್ ಡಿಪ್).
 (ಐ.ಆರ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ